ಸೂರದಾಸ
	1483-1563. ಹಿಂದಿ ಸಾಹಿತ್ಯದ ಅಗ್ರ ಕವಿ ಮತ್ತು ಗಾಯಕ. ಬ್ರಜಭಾಷೆಯಲ್ಲಿ ಮೊತ್ತಮೊದಲು ವಸಂತಗಾಯನ ಮಾಡಿದ ಕವಿ. ಈತನನ್ನು ಬ್ರಜಭಾಷೆಯ ವಾಲ್ಮೀಕಿ ಎಂದೇ ಕರೆಯಲಾಗಿದೆ. 

	ಈತನ ಬದುಕಿನ ಬಗ್ಗೆ ವಾದ-ವಿವಾದಗಳು ಇವೆ. ಈತ ದೆಹಲಿ ಬಳಿಯ ನೇಹೀ ಎಂಬ ಹಳ್ಳಿಯಲ್ಲಿ ಜನಿಸಿದ. ಇವನ ತಂದೆ ರಾಮದಾಸ. ಸೂರದಾಸ ಜನ್ಮಾಂಧನೋ ಅಥವಾ ತರುವಾಯ ಕುರುಡನಾದನೋ ಎಂಬ ಬಗ್ಗೆಯೂ ವಿವಾದವಿದೆ. ಈತನ ಕುರುಡಿನ ವಿಷಯವಾಗಿ ಒಂದು ಕಥೆಯಿದೆ. ಈತ ಯೌವನದಲ್ಲಿ ವಿಷಯಾಸಕ್ತನಾಗಿ ಕಣ್ಣು ಕಳೆದುಕೊಂಡು ಒಂದು ದಿನ ಬಾವಿಗೆ ಬಿದ್ದುಬಿಟ್ಟನಂತೆ. ಆಗ ಒಬ್ಬ ಬಾಲಕ ಬಂದು ಈತನನ್ನು ಕೈಹಿಡಿದು ಬಾವಿಯಿಂದ ಮೇಲಕ್ಕೆ ಎತ್ತಿದನಂತೆ. ಅವನೇ ಬಾಲಕೃಷ್ಣ. ಬಾಲಕೃಷ್ಣನ ಮೃದುಲ ಸ್ಪರ್ಶದಿಂದ ಕವಿಯಾಗಿ ಇವನ ಬಾಯಿಂದ ಪದ ಪ್ರವಹಿಸಿತಂತೆ. 1509-10ರಲ್ಲಿ ವಲ್ಲಭಾಚಾರ್ಯರು ವ್ರಜಯಾತ್ರೆಗೆ ಹೋದಾಗ ಅಲ್ಲಿ ಸೂರದಾಸನನ್ನು ಕಂಡು ಈತನಿಗೆ ದೀಕ್ಷೆ ನೀಡಿ, ಜೊತೆಯಲ್ಲಿ ಕರೆದುಕೊಂಡು ಹೋಗಿ ಶ್ರೀನಾಥನ ಕೀರ್ತನ-ಕೈಂಕರ್ಯವನ್ನು ಒಪ್ಪಿಸಿದರು. ಅಂದಿನಿಂದ ಸೂರದಾಸ ಗೋವರ್ಧನ ಗಿರಿಯ ಬಳಿ ಪಾರಸೋಲಿ ಎಂಬಲ್ಲಿ ನೆಲೆಯೂರಿದ. ಕೊನೆಯವರೆಗೂ ಅಲ್ಲೆ ಇದ್ದು 1563ರ ಸುಮಾರಿಗೆ ನಿಧನನಾದ. 

	ಕಾಶಿಯ ನಾಗರೀ ಪ್ರಚಾರಿಣೀ ಸಭೆಯ ವರದಿ ಪ್ರಕಾರ ಸೂರದಾಸನ ಕೃತಿಗಳು ಹದಿನಾರು, ದ್ವಾರಕಾದಾಸ ಪಾರೀಖರ ಪ್ರಕಾರ ಹತ್ತೊಂಬತ್ತು ಎನ್ನಲಾಗಿದೆ. ಸೂರಸಾಗರ, ಸೂರಸಾರಾವಲೀ ಮತ್ತು ಸಾಹಿತ್ಯ ಲಹರಿ ಈ ಮೂರೇ ಸೂರದಾಸನ ಪ್ರಾಮಾಣಿಕ ಕೃತಿಗಳೆಂದು ವಿದ್ವಾಂಸರ ಅಭಿಪ್ರಾಯ. ಸಾಹಿತ್ಯ ಲಹರಿ ದೃಷ್ಟಿಕೂಟ ಪದಗಳ ಸಂಗ್ರಹ. ಇದರಲ್ಲಿ ರಸ, ಅಲಂಕಾರ ನಾಯಿಕಾಭೇದ ಇತ್ಯಾದಿಗಳ ವರ್ಣನೆಯಿದೆ. ಸೂರಸಾರಾ ವೇಲೀಯಲ್ಲಿ ಕಾಮನಹಬ್ಬದ ಹಾಡುಗಳ ಸಂಗ್ರಹವಿದೆ. ಇದರಲ್ಲಿ 1017 ದ್ವಿಪದಿಗಳಿವೆ. ಆದರೆ ವ್ರಜೇಶ್ವರವರ್ಮರು ಸೂರಸಾರಾವಲೀಯನ್ನು ಸೂರದಾಸನ ಕೃತಿ ಎಂದು ಒಪ್ಪುವುದಿಲ್ಲ. 

	ಸೂರಸಾಗರ ಕೀರ್ತಿಕೌಮುದಿಯಾಗಿದೆ. ಇದು ಭಕ್ತಿಯ ತವನಿಧಿ. ಇದರಲ್ಲಿ ಒಂದೂ ಕಾಲು ಲಕ್ಷ ಪದಗಳಿದ್ದವೆಂದು ಜನಶ್ರುತಿ. ಆದರೆ ಈಗ ದೊರೆತಿರುವ ಪದಗಳು ಹತ್ತು ಸಾವಿರದಷ್ಟೂ ಇಲ್ಲ. ಸೂರಸಾಗರದಲ್ಲಿ ಕೀರ್ತನೆಗಳ ಸಂಗ್ರಹವಿದೆ. ಇದರ ಮೂಲ ಶ್ರೀಮದ್ಭಾಗ ವತ. ಭಾಗವತದ ದಶಮಸ್ಕಂದದ ಕಥೆ ಇವರ ಕೀರ್ತನೆಗಳ ವಸ್ತುವಾಗಿದೆ. ಭಾಗವತದ ವಸ್ತುವಿಗೆ ತನ್ನ ಪ್ರತಿಭಾಸಂಪನ್ನತೆಯಿಂದ ಹೊಸತನ ಮೂಡಿಸಿದ್ದಾನೆ. ಈ ಕೃತಿಯಲ್ಲಿ ಬಾಲಕೃಷ್ಣನ ಮನೋಜ್ಞ ಚಿತ್ರಣ, ಶೃಂಗಾರ ರಸದಲ್ಲಿ ಪ್ರಕೃತಿ ಮತ್ತು ಪ್ರೇಮಗಳ ಮೇಳ, ಋತುವರ್ಣನೆ, ನಖಶಿಖ ವರ್ಣನೆ, ರಾಧಾಕೃಷ್ಣರ ಪ್ರೇಮದ ವಿಕಾಸ ಮತ್ತು ಪರಾಕಾಷ್ಠೆಗಳನ್ನು ವಿಯೋಗಶೃಂಗಾರದಲ್ಲಿ ಭ್ರಮರಗೀತೆ  ಚಿತ್ರಿಸಿದ್ದಾನೆ. 

	ಸೂರಸಾಗರದಲ್ಲಿ ಮೂಡಿಬಂದ ಕೃಷ್ಣನ ಬಾಲಲೀಲೆಯ ವರ್ಣನೆ ವಿಶ್ವಸಾಹಿತ್ಯಕ್ಕೆ ಒಂದು ಅಪೂರ್ವ ಕೊಡುಗೆ. ಸಂಗೀತ ಮತ್ತು ಸಾಹಿತ್ಯಗಳ ಸಂಗಮ. ಬಿಡಿಯಾಗಿ ನೋಡಿದರೆ ಸೂರಸಾಗರದ ಪ್ರತಿಯೊಂದು ಪದವೂ ಶ್ರೇಷ್ಠ ಭಾವಗೀತೆಯಂತಿದೆ. ಇಡಿಯಾಗಿ ನೋಡಿದರೆ ಇದೊಂದು ಪ್ರಬಂಧಕಾವ್ಯ. ಗಾಯಕ-ಕವಿ ಎರಡೂ ಆದ ಈತ ವಿವಿಧ ರಾಗಗಳಲ್ಲಿ ತನ್ನ ಕೀರ್ತನೆಗಳನ್ನು ಹಾಡಿದ್ದಾನೆ. ಭ್ರಮರಗೀತ, ಸೂರಸಾಗರದ ಅತ್ಯಂತ ಅಭಿರಾಮ ರಸತೀರ್ಥ. ಹಿಂದಿ ಸಾಹಿತ್ಯದಲ್ಲಿ ಭ್ರಮರಗೀತ ಪರಂಪರೆಯ ಪ್ರವರ್ತಕ ಎಂಬ ಶ್ರೇಯಸ್ಸು ಈತನಿಗೆ ಸಲ್ಲುತ್ತದೆ. 

	ಈತ  ಭಕ್ತಕವಿ. ಈತನಲ್ಲಿ ದಾಸ್ಯ, ವಾತ್ಸಲ್ಯ ಮತ್ತು ಸಖ್ಯಭಾವದ ಭಕ್ತಿಯನ್ನು ಕಾಣುತ್ತೇವೆ. ವ್ಯಕ್ತಿತ್ವದಲ್ಲಿ ಕವಿ, ಭಕ್ತ ಮತ್ತು ಗಾಯಕ ಗುಣಗಳನ್ನು ನೋಡುತ್ತೇನೆ. ಈತನ ಕಾವ್ಯದಲ್ಲಿನ ಪ್ರಥಮ ಗುಣ ಮಾಧುರ್ಯ. ಸಂಗೀತ ಸಮ್ರಾಟ ತಾನಸೇನನ ಬಾಯಿಂದ ಸೂರದಾಸನ ಪದವೊಂದನ್ನು ಕೇಳಿ ಮಾರುಹೋಗಿ ಅಕ್ಬರ್ ಸೂರದಾಸನನ್ನು ನೋಡಲು ಹೋದ ಎಂಬ ಕಥೆಯಿದೆ. 

	ಶೂರನ ಬಾಣ ದೇಹದಲ್ಲಿ ನಾಟದಂತೆ ಸೂರನ ಪ್ರೇಮವೇದನೆ ಕರುಳನ್ನು ಇರಿಯುತ್ತದೆ. ಸೂರನ ಪದಗಳನ್ನು ಕೇಳಿ ನಮ್ಮ ತನುಮನಗಳು ಪ್ರಶಂಸೆಯಿಂದ ಮಿಡಿಯತೊಡಗುತ್ತದೆ ಎಂದು ಸೂರದಾಸನ ಬಗೆಗೆ ತಾನಸೇನ್ ಆಡಿದ ಮಾತುಗಳು ಕೇವಲ ಸ್ತುತಿಯಲ್ಲ, ವಸ್ತುಸ್ಥಿತಿ.	
								
(ವಿ.ಡಿ.ಎಚ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ